ಬಾಹುಬಲಿ ಕವಿ: -
ಜೈನಕವಿ. ಸು. ೧೫೬೦. ಈತ ನಾಗಕುಮಾರ ಚರಿತೆಯನ್ನು ಸಾಂಗತ್ಯದಲ್ಲಿ ಬರೆದಿದ್ದಾನೆ. ಶೃಂಗೇರಿಯ ದೊರೆ ಭೈರವೇಂದ್ರ ಆಸ್ಥಾನ ಕವಿಯಾಗಿದ್ದನೆಂದು ತಿಳಿದು ಬರುತ್ತದೆ.ಗುರು ಲಲಿತಕೀರ್ತಿಗಳು. ತಂದೆ ವಣಿಜ ಶಿರೋಮಣಿ ಸಣ್ಣಣ್ಣ ಎಂದೂ ತಾಯಿ ಬೊಮ್ಮಲದೇವಿ ಎಂದೂ ತಿಳಿದು ಬರುತ್ತದೆ.

ಬಾಹುಬಲಿ ಈ ಗ್ರ್ರಂಥವನ್ನು ಪೂರ್ತಿಯಾಗಿ ಬರೆಯಲಿಲ್ಲ.ಗ್ರಂಥ ಪೂರ್ತಿಯಾಗುವುದರೊಳಗೆ ಆತ ದೈವಾಧೀನನಾಗಲು ಕವಿ ಮಗ ವರ್ಧಮಾನ ಎಂಬಾತ ಅದನ್ನುಪೂರೈಸಿದಂತೆಗ್ರಂಥಾಂತ್ಯದಲ್ಲಿರುವ ಪದ್ಯದಿಂದ ತಿಳಿದು ಬರುವುದು. ಆಶ್ವಾಸಗಳ ಕೊನೆಯಲ್ಲಿರುವ ಗದ್ಯದಲ್ಲಿ ಬಾಹುಬಲಿಕೃತ ಎಂದಿದ್ದು ಗ್ರಂಥಾಂತ್ಯದ ಗದ್ಯದಲ್ಲಿ ಮಾತ್ರ ವರ್ಧಮಾನಕೃತ ಎಂದಿದೆ. 

ಸಾಂಗತ್ಯದಲ್ಲಿರುವ ಈ ಕಥೆಯಲ್ಲಿ 8 ಅಶ್ವಾಸ 32 ಸಂಧಿ 3600 ಪದ್ಯಗಳಿವೆ. ಅಲ್ಲಲ್ಲಿ ವಚನಗಳೂ ಇವೆ. ಈ ಗ್ರ್ರಂಥದಲ್ಲಿ ಹೊನ್ನು ಹೆಣ್ಣು ತೃಣವೆಂದರಿತು ಕರ್ಮಮಾರ್ಗವನ್ನು ಹಿಡಿದು ಮಹಾತ್ಮನಾದ ನಾಗಕುಮಾರನ ಕಥೆ ಹೇಳಿದೆ. ಗ್ರಂಥಾದಿಯಲ್ಲಿ ಕವಿ ನೇಮಿಜಿನಸ್ತುತಿ ಬಳಿಕ ಸಿದ್ಧಾದಿಗಳು, ಕವಿಪರಮೇಷ್ಟಿ, ಕುಮುದೇಂದು, ಶ್ರೀಧರಾಚಾರ್ಯ ಮುಂತಾದ ಪೂರ್ವ ಕವಿಗಳನ್ನು ಸ್ಮರಿಸಿದ್ದಾನೆ. 						(ಕೆ.ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ